ಕಾವುಜೇಡು

 ಬೆಂಕಿಯ ಕಾವನ್ನು ತಡೆಯುವ ಮತ್ತು ಅಗ್ನಿಮಾಪಕ ಶಂಕು (ಪೂರೋಮೆಟ್ರಿಕ್ ಕೋನ್) 19ಕ್ಕೂ ಹೆಚ್ಚು ಕಾವಿಗೂ ಮಾರ್ಪಾಡಾಗದೆ ಇರುವ ಜೇಡುಮಣ್ಣು (ಫೈರ್ ಕ್ಲೇ). ಕಾವುಜೇಡು ಮುಖ್ಯವಾಗಿ ಕೇಯೊಲಿ-ನೈಟ್ ಗುಂಪಿಗೆ ಸೇರಿದೆ. ರಾಸಾಯನಿಕವಾಗಿ ಇದು ಸುದ್ದೆಮಣ್ಣನ್ನು ಹೋಲುತ್ತದೆ. ಇದರಲ್ಲಿ 24-32% ಅಲ್ಯುಮಿನಾ 50-62% ಸಿಲಿಕಾ ಮತ್ತು 9-12% ನೀರಿನ ಅಂಶ ಇದೆ. ಕ್ಯಾಲ್ಸಿಯಂ ಮೊದಲಾದ ಲೋಹಗಳ ಆಕ್ಸೈಡುಗಳು ಬೆರೆತಾಗ ಜೇಡಿಗೆ ಬಿಳಿ ಕಂದು ಮತ್ತು ಕಪ್ಪು ಬಣ್ಣಗಳು ಬರುತ್ತವೆ. ಅಗ್ನಿನಿರೋಧಕವಾಗಿ ಮತ್ತು ಜಿಗಟಾಗಿರುವ ಕಾವುಜೇಡಿನಿಂದ ಕಾವಿಟ್ಟಿಗೆಗಳನ್ನು ತಯಾರು ಮಾಡಬಹುದು. ಅಧಿಕ ಉಷ್ಣತೆಗಳಲ್ಲಿ ಕರಗಿಹೋಗದೆ ಇರುವ ಗುಣದ ಮೇಲೆ ಕಾವುಜೇಡನ್ನು ಅಲ್ಪ ಮಧ್ಯಮ, ಉತ್ತಮ ಮತ್ತು ಅತ್ಯುತ್ತಮ ಸಾಮಥ್ರ್ಯ ಉಳ್ಳವುಗಳೆಂದು ವಿಭಾಗಿಸಬಹುದು.

 ಕಾವುಜೇಡು ಸಾಮಾನ್ಯವಾಗಿ ಕಲ್ಲಿದ್ದಲು ಸ್ತರಗಳ ಜೊತೆಗೆ ಪದರಶಿಲೆಯಾಗಿ ಅಸ್ಸಾಂ, ಬಂಗಾಳ, ಬಿಹಾರ್, ಒರಿಸ್ಸ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಸಿಗುತ್ತದೆ. ಶೇಷನಿಕ್ಷೇಪಗಳಾಗಿ ಜೇಡು ಮಧ್ಯಪ್ರದೇಶದ ಜಬ್ಬಲ್‍ಪುರ ಜಿಲ್ಲೆಯಲ್ಲಿ ದೊರೆಯುತ್ತದೆ. ಜೂರಾಸಿಕ್ ಮರಳು ಶಿಲೆಗಳ ಕೆಳಗೆ ಇರುವ ಜೇಡು ಗುಜರಾತಿನಲ್ಲಿ ದೊರೆಯುತ್ತದೆ. ಆದರ್ಶ ಕಾವುಜೇಡು ಮೈಸೂರು ರಾಜ್ಯದಲ್ಲಿ ದೊರೆಯುವುದಿಲ್ಲ. ಪ್ರತಿವರ್ಷವೂ ಸರಾಸರಿ ನಾಲ್ಕು ಲಕ್ಷ ಟನ್ ಜೇಡು ಉತ್ಪನ್ನವಾಗುತ್ತಿದೆ. ಮುಖ್ಯವಾಗಿ ಈ ಜೇಡಿನಿಂದ ತಯಾರಾದ ಕಾವಿಟ್ಟಿಗೆಗಳನ್ನು ಕಬ್ಬಿಣ ಕರಗಿಸುವ ಊದುಕುಲುಮೆಗಳಲ್ಲಿ ಉಪಯೋಗಿಸುತ್ತಾರೆ.

 

(ಎಂ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ